ದೇಶ

ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವಿಸ್ ಗೆ ಶುಭ ಕೋರಿದ ಉದ್ಧವ್ ಠಾಕ್ರೆ

Lingaraj Badiger

ಮುಂಬೈ: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿಯಾಗಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಶಿಂಧೆ ಮತ್ತು ದೇವೇಂದ್ರ ಪಢ್ನವಿಸ್ ಅವರಿಗೆ ನಿರ್ಗಮಿತ ಮುಖ್ಯಮಂತ್ರಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.

"ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಶುಭಾಶಯಗಳು. ನೀವು ಮಹಾರಾಷ್ಟ್ರಕ್ಕೆ ಒಳ್ಳೆಯ ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ" ಎಂದು ಉದ್ಧವ್ ಠಾಕ್ರೆ ಅವರು ಟ್ವೀಟ್ ಮಾಡಿದ್ದಾರೆ.

ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಇಂದು ಮಹಾರಾಷ್ಟ್ರದ 20ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಹತ್ತು ದಿನಗಳ ರಾಜಕೀಯ ಬಿಕ್ಕಟ್ಟಿಗೆ ನಾಟಕೀಯ ತೆರೆ ಬಿದ್ದಿದೆ.

ರಾಜಭವನದಲ್ಲಿ ಇಂದು 7.30ಕ್ಕೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ನೂತನ ಸಿಎಂ ಮತ್ತು ಡಿಸಿಎಂಗೆ ಪ್ರಮಾಣವಚನ ಬೋಧಿಸಿದರು. ಮರಾಠಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಶಿಂಧೆ, ಬಾಳಾಸಾಹೇಬ್ ಠಾಕ್ರೆ ಅವರನ್ನು ಸ್ಮರಿಸಿಕೊಂಡರು. ಮಹಾರಾಷ್ಟ್ರದ ಜನತೆ ಮತ್ತು ಶಿವಸೇನೆಯ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು.

SCROLL FOR NEXT