ಮೈಸೂರು

ಜನಪದ ಮಾಯ್ಕಾರರಿಗೆ ಸಹೃದಯರಿಂದ ಮರ್ವಾದೆ

Rashmi Kasaragodu

ಮೈಸೂರು: ಸಾಂಸ್ಕೃತಿಕ ರೂವಾರಿಗಳಾದ ಜನಪದರ ಪದಗಳನ್ನು ಹಾಡುತ್ತ, ಕುಣಿಯುತ್ತ ನೀಡಿದ ಕಾರ್ಯಕ್ರಮಕ್ಕೆ ಮೈಸೂರಿನ ಸಹೃದಯಿಗಳು ತಲೆದೂಗಿದರು. ಏಕತಾರಿ ತಂಡವು ಕರ್ನಾಟಕ ಜನಪದ ಅಕಾಡೆಮಿ ಸಹಯೋಗದೊಂದಿಗೆ ಶುಕ್ರವಾರ ರಂಗಾಯಣದ ವನರಂಗದಲ್ಲಿ ಏರ್ಪಡಿಸಿದ್ದ ಮಾಯ್ಕಾರರಿಗೆ ಮರ್ವಾದೆ ಹಾಗೂ ಜನಪದಗೀತ ಗಾಯನ ಕಾರ್ಯಕ್ರಮದಲ್ಲಿ ಜನಪದರು, ಜನಪದ ವಿದ್ವಾಂಸರು ಹಾಗೂ ಗಾಯಕರ ಸಮೂಹ ಒಟ್ಟಿಗೆ ಕುಳಿತು ಹಾಡಿದ್ದು ಮೂಕವಿಸ್ಮತರನ್ನಾಗಿಸಿತು. ಮೊದಲಿಗೆ ಸಾಂಸ್ಕೃತಿಕ ನಾಯಕರಾದ ಮಂಟೇಲಿಂಗಯ್ಯನವರನ್ನು ಸ್ಮರಿಸಿದ ಗಾಯಕರು ಸಿದ್ದಯ್ಯ ಸ್ವಾಮಿ ಬನ್ಯೋ, ಮಂಟೇದಲಿಂಗಯ್ಯ ನೀವೆ ಬನ್ಯೋ.. ಗೀತೆ ಹಾಡುವ ಮೂಲಕ ಕಾರ್ಯಕ್ರಮ ಆರಂಭಿಸಿದರು. ಬಳಿಕ ಎಚ್. ಜನಾರ್ದನ್ ಅವರು ಶರಣು ಶರಣಯ್ಯ ಗಣನಾಯಕ.. ಗೀತೆಯನ್ನು, ದೇವಾನಂದ ವರಪ್ರಸಾದ್ ಅವರು ಎಲೆ ಕೆಂಚಿ ಬಾರೆ, ನನ್ನ ಮನೆ ತನಕ ಬಾರೆ.. ಗೀತೆಯನ್ನು, ಯುವ ಗಾಯಕ ಚಿಂತನ್ ವಿಕಾಸ್ ಆಡಿದವರ ಮನವ, ನೀಡಿದವರ ನಿಜವ ಬಲ್ಲೆ ಸಿದ್ದಯ್ಯ ಸ್ವಾಮಿ ಬನ್ನಿ.. ಗೀತೆಯನ್ನು ಹಾಗೂ ಶುಭ ರಾಘವೇಂದ್ರ ಅವರು ದನಿಗೂಡಿಸಿ ಹಾಡಿದರು. ಇವರೊಟ್ಟಿಗೆ ಏಕತಾರಿಯ ನಲವತ್ತು ಮಂದಿ ಸಹ ಗಾಯಕರು ಸಾಥ್ ನೀಡಿದರು. ಇದೇ ವೇಳೆ ಮಾಯ್ಕಾರರಾದ ತಂಬೂರಿ ಜವರಯ್ಯ ಮತ್ತು ಬೋರಮ್ಮ ದಂಪತಿ, ಕಂಸಾಳೆ ಕುಮಾರಸ್ವಾಮಿ, ಕುಕ್ಕರಹಳ್ಳಿ ಮರಿಸಿದ್ದಮ್ಮ, ಮೈಸೂರು ಗುರುರಾಜ್ ಅವರನ್ನು ಜಾನಪದ ತಜ್ಞರಾದ ಡಾ.ಹಿ.ಶಿ. ರಾಮಚಂದ್ರಗೌಡ, ಪ್ರೊ.ಕಾಳೇಗೌಡ ನಾಗವಾರ, ಡಾ.ಪಿ.ಕೆ. ರಾಜಶೇಖರ್, ಡಾ.ಕೃಷ್ಣಮೂರ್ತಿ ಹನೂರು ಮರ್ವಾದೆ ಮಾಡಿದರು.

SCROLL FOR NEXT