ಸಿನಿಮಾ ಸುದ್ದಿ

ನಟನಾಗಿದ್ದು ನನ್ನ ಅದೃಷ್ಟ, ಕನ್ನಡ ಚಿತ್ರರಂಗ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ: ಅನಂತ್ ನಾಗ್

Shilpa D

ಯೋಗರಾಜ್ ಭಟ್ ನಿರ್ದೇಶನದ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಹಿರಿಯ ನಟ ಅನಂತ್ ನಾಗ್ ಅವರು ಒಂದು ಪಾತ್ರ ನಿರ್ವಹಿಸಿರುತ್ತಾರೆ. ಮುಂಗಾರು ಮಳೆಯಲ್ಲಿ ಆರಂಭವಾದ  ಅನಂತ್ ನಾಗ್ ಮತ್ತು ಯೋಗರಾಜ್ ಭಟ್ ಸಹಯೋಗವು ಗಾಳಿಪಟ, ಪಂಚರಂಗಿ, ವಾಸ್ತು ಪ್ರಕಾರ, ಮತ್ತು ಈಗ ಗಾಳಿಪಟ 2  ವರೆಗೂ ಮುಂದುವರೆದಿದೆ.

ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರದಲ್ಲಿ ಅನಂತ್ ನಾಗ್  ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. “ಗಾಳಿಪಟ 2 ಸಿನಿಮಾದಲ್ಲಿ, ಗಣೇಶ್ ಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ. ನಿರ್ಮಾಪಕರಾಗಿ ರಮೇಶ್ ರೆಡ್ಡಿ  ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಗಾಳಿಪಟ 2 ಅವರಿಗೆ ಯಶಸ್ವಿಯಾಗಲಿದೆ ಎಂದು ನಾನು ಅವರಿಗೆ ಹೇಳುತ್ತಲೇ ಇದ್ದೆ, ಸದ್ಯ ಸಿನಿಮಾ  ಉತ್ತಮ ಪ್ರದರ್ಶನ ಕಾಣುತ್ತಿರುವುದು ನನಗೆ ಸಂತೋಷ ತಂದಿದೆ ಎಂದು ಅನಂತ್ ನಾಗ್ ಹೇಳುತ್ತಾರೆ.

ಹಿರಿಯ ನಟ ಅನಂತ್ ನಾಗ್ ತಮ್ಮ  ಪಾತ್ರಗಳ ಆಯ್ಕೆಯ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ನಟನಾಗಿದ್ದು ದೇವರ ಇಚ್ಛೆ. ಇದು ಒಂದು ದೊಡ್ಡ ಪ್ರಯಾಣವಾಗಿದೆ. ನಾನು ನಟನಾಗಲು ಅದೃಷ್ಟ ಮಾಡಿದ್ದೆ. ದೇವರು ನನಗೆ ಸಾಕಷ್ಟು ಅವಕಾಶಗಳನ್ನು ಕೊಟ್ಟಿದ್ದಾನೆ, ಕನ್ನಡ ಇಂಡಸ್ಟ್ರಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ರಾಜಕೀಯದಲ್ಲಿನ ನನ್ನ ಅವಧಿಯು ನನ್ನನ್ನು ಚಲನಚಿತ್ರಗಳಿಂದ ದೂರವಿಟ್ಟಿತು, ಆ ವೇಳೆ ನಾನು ನಟನೆಯನ್ನು ಎಷ್ಟು ಮಿಸ್ ಮಾಡಿಕೊಂಡಿದ್ದೇನೆ ಎಂದು ನಾನು ಅರಿತುಕೊಂಡೆ ಎಂದು ಅನಂತ್ ನಾಗ್ ವಿವರಿಸಿದ್ದಾರೆ.

ಗಾಳಿಪಟ 2 ರಲ್ಲಿ ಕನ್ನಡ ಪ್ರಾಧ್ಯಾಪಕನಾಗಿ ನಟಿಸುವುದು  ಸವಾಲಿನ ಸಂಗತಿ ಎನ್ನುತ್ತಾರೆ ಅನಂತ್ ನಾಗ್. “ನಾನು ಯೋಗರಾಜ್ ಭಟ್ ಅವರೊಂದಿಗೆ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದೇನೆ, ಅಂತಿಮವಾಗಿ ಅವರು ಅತ್ಯುತ್ತಮವಾದದ್ದನ್ನು ಹೊರತಂದರು. ಇದು ನಿರ್ದೇಶಕರ ಅದ್ಭುತ ಸೃಷ್ಟಿಯಾಗಿದೆ. ಶಾಲಾ ದಿನಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಭಾಷೆಯ ಮೇಲೆ ಅಪಾರ ಅಭಿಮಾನ. ಹಾಗಾಗಿ ಕನ್ನಡ ಪ್ರಾಧ್ಯಾಪಕನ ಈ ಪಾತ್ರ ನನಗೆ ವಿಶೇಷವಾಗಿತ್ತು. ನಾನು ತುಂಬಾ ಜಾಗರೂಕನಾಗಿದ್ದೆ ಮತ್ತು ನನ್ನ ಪಾತ್ರವು ವಿಶೇಷವಾಗಿರಬೇಕು ಮತ್ತು 3 ಹುಡುಗರು ಮತ್ತು 3 ಹುಡುಗಿಯರಿಗಿಂತ ಭಿನ್ನವಾಗಿರಬೇಕು ಎಂದು ಒತ್ತಾಯಿಸಿದೆ. ಅವರು  ನನಗಾಗಿ ಅದ್ಭುತ ಪಾತ್ರ ಸೃಷ್ಟಿಸಿದರು ಎಂದು ಅನಂತ್ ನಾಗ್ ಹೇಳಿದ್ದಾರೆ.

ಗಣೇಶ್ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡ ಅನಂತ್ ನಾಗ್, ಅವರ ಜೊತೆ ಕೆಲಸ ಮಾಡುವುದೇ ಖುಷಿಯ ಸಂಗತಿ, ಅವರು ಕೂಡ ನನ್ನ ಹಾಗೆಯೇ ಸಹಜವಾಗಿ ಅಭಿನಯಿಸುತ್ತಾರೆ,  ನನಗ  ತುಂಬಾ ಹತ್ತಿರವಾದ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ನಾವು ಜೊತೆಗೆ ನಟಿಸಿದ್ದೇವೆ ಎಂದಿದ್ದಾರೆ.

ಗಾಳಿಪಟ 2 ಸ್ನೇಹಿತರ ಕುರಿತಾದ ಕಥೆಯಾಗಿದ್ದು, ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಶಿಕ್ಷಕರೊಂದಿಗಿನ ಅವರ ಬಾಂಧವ್ಯವನ್ನು ಅನಂತ್ ಸ್ಮರಿಸಿದ್ದಾರೆ. “ಮೊದಲ 8 ವರ್ಷಗಳಲ್ಲಿ ನಾನು ಕರಾವಳಿ ಪ್ರದೇಶದಲ್ಲಿ ಶಿಕ್ಷಣ ಪಡೆದೆ. ನಂತರ ನಾನು ಬಾಂಬೆಗೆ ಹೋದೆ, ಅಲ್ಲಿ ನನಗೆ ಹೊಸ ಸ್ನೇಹಿತರು ಸಿಕ್ಕಿದರು. ನಾನು ನಾಟಕದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ನನಗೆ ಮತ್ತೊಂದು ಸೆಟ್ ಜನರು ಸಿಕ್ಕರು. ಆದರೆ, ಬೆಂಗಳೂರಿನಲ್ಲಿ ನನ್ನ ಸಿನಿಮಾ ವೃತ್ತಿಜೀವನ ಆರಂಭಿಸಿದಾಗ ನನಗೆ ಇಲ್ಲಿ ಹೆಚ್ಚು ಸ್ನೇಹಿತರಿರಲಿಲ್ಲ.

ಇಲ್ಲಿ ನನ್ನ ಜೊತೆಗಿದ್ದವರು ನನಗಿಂತ 15 ರಿಂದ 20 ವರ್ಷ ಹಿರಿಯರು, ಆದರೂ ನಾವೆಲ್ಲರೂ ಸ್ನೇಹಿತರಂತೆ ಇದ್ದೆವು. ಅವರು ನನ್ನ ಹಿತೈಷಿಗಳು, ಅವರು ನನ್ನ ಚಲನಚಿತ್ರಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ನಾನು ಇಲ್ಲಿ ನನ್ನ ಶಾಲಾ ಶಿಕ್ಷಣವನ್ನು ಮಾಡದ ಕಾರಣ ನನಗೆ ಸ್ನೇಹಿತರ ಕೊರತೆಯಿತ್ತು. ಈ ಕೊರತೆಯನ್ನು ವೈಎನ್‌ಕೆ, ವಿಎನ್ ಸುಬ್ಬರಾವ್, ನಾರಾಯಣ ಸ್ವಾಮಿ ಮತ್ತು ಶೇಷಾದ್ರಿ ಇತರರು ತುಂಬಿದರು. ದುರದೃಷ್ಟವಶಾತ್, ಅವರಲ್ಲಿ ಯಾರೂ ಇಂದು ಜೀವಂತವಾಗಿಲ್ಲ.

ಜನವರಿ 2023 ರಲ್ಲಿ ತಮ್ಮ ಚಲನಚಿತ್ರ ಪ್ರಯಾಣದ 50 ವರ್ಷಗಳನ್ನು ಆಚರಿಸಲಿರುವ  ಅನಂತ್ ನಾಗ್ ಅವರಿಗೆ  ಮತ್ತಷ್ಟು ಸವಾಲಿನ ಪಾತ್ರಗಳು ಬೇಕು ಎನ್ನುತ್ತಾರೆ. ಮೇಡ್ ಇನ್ ಬೆಂಗಳೂರು, ಅಬ್ರ ಕಾ ದಬ್ರಾ, ವಿಜಯಾನಂದ್, ತಿಮ್ಮಯ್ಯ ಅಂಡ್  ತಿಮ್ಮಯ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

SCROLL FOR NEXT